ಮನೆಯಲ್ಲಿದ್ದ ಐವರಿಗೂ ಗಾಯ, ಆಸ್ಪತ್ರೆಗೆ ದಾಖಲು – ಒಂದು ವರ್ಷದ ಮಗು ಪವಾಡಸದೃಶವಾಗಿ ಪಾರು

ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಚಳ್ಳಂಗಾರು ಎಂಬಲ್ಲಿ ನವೆಂಬರ್ 25ರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ಮನೆಯ ಮೇಲೆ ಉರುಳಿಬಿದ್ದು ಮನೆ ಸಂಪೂರ್ಣ ಧ್ವಂಸಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಐವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಒಂದು ವರ್ಷದ ಮಗು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದೆ.

ಚಳ್ಳಂಗಾರಿನ ದೇವಿದಾಸ ಎಂಬವರಿಗೆ ಸೇರಿದ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಶಾಂತಿ ಮರವು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಏಕಾಏಕಿ ಮನೆಯ ಮೇಲೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ದೇವಿದಾಸರು, ಅವರ ಪತ್ನಿ, ತಂಗಿ ಸೇರಿದಂತೆ ಐದಕ್ಕೂ ಹೆಚ್ಚು ಮಂದಿ ಮನೆಯಲ್ಲಿದ್ದರು. ಮರ ಬಿದ್ದ ರಭಸಕ್ಕೆ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಘಟನೆಯ ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳು ಸದ್ಯ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕಿ ಭೇಟಿ, ಪರಿಶೀಲನೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಪಕ್ಷದ ಮುಖಂಡರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Leave a Reply

Your email address will not be published. Required fields are marked *