ಹೈನುಗಾರಿಕೆ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟದಲ್ಲಿದ್ದರು; ಬೆಲೆ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂದ ಮುತ್ತಪ್ಪ

ಕುಶಾಲನಗರ: ಕರ್ನಾಟಕ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಿರುವುದು ಹಾಗೂ ಇದರಲ್ಲಿ 7 ರೂ.ಗಳನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮ ಎಂದು ಹಾಲು ಉತ್ಪಾದಕ ರೈತ ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕ ರೈತರಿಗೆ ಸೂಕ್ತ ಬೆಲೆ ಹೆಚ್ಚಳವಾಗಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಹಾಲು ಉತ್ಪಾದನೆಯ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಉತ್ಪಾದನಾ ವೆಚ್ಚವನ್ನು ಭರಿಸಲಾಗದೆ ಅನೇಕ ರೈತರು ಹೈನುಗಾರಿಕೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ರಾಜ್ಯದಲ್ಲಿ ಜಾನುವಾರುಗಳ ಸಂಖ್ಯೆಯೂ ಇಳಿಮುಖವಾಗಿದೆ. ಇದೀಗ ಹಾಲಿನ ದರ ಹೆಚ್ಚಳದಿಂದ ರೈತರಿಗೆ ಆರ್ಥಿಕ ನೆರವು ದೊರೆಯಲಿದ್ದು, ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆಯತ್ತ ಆಸಕ್ತಿ ತೋರಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೇವು, ಪಶು ಆಹಾರ ಹಾಗೂ ಚಿಕಿತ್ಸಾ ವೆಚ್ಚ ಭಾರಿ ಏರಿಕೆ

ಐದು ವರ್ಷಗಳ ಹಿಂದೆ ಒಂದು ಟನ್ ಹಸಿ ಜೋಳದ ಮೇವಿನ ಬೆಲೆ 1,800 ರೂ.ಗಳಷ್ಟಿತ್ತು. ಆದರೆ ಇದೀಗ ಅದರ ಬೆಲೆ 5,000 ರೂ. ದಾಟಿದೆ. ಪಶು ಆಹಾರ, ಔಷಧಿ, ಪಶುಗಳ ಚಿಕಿತ್ಸಾ ವೆಚ್ಚ ಹಾಗೂ ಪೂರಕ ಆಹಾರಗಳ ಬೆಲೆ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ರಾಜಕೀಯ ದೃಷ್ಟಿಕೋನದಿಂದ ವಿರೋಧಿಸದೆ, ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಬೇಕು ಎಂದು ನಾಪಂಡ ಮುತ್ತಪ್ಪ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *