ಗೂನಡ್ಕದಲ್ಲಿ ನಡೆದ ಸಭೆಯಲ್ಲಿ ಶತಮಾನೋತ್ಸವದ ಪ್ರಚಾರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು ಚರ್ಚೆ
ಸುಳ್ಯ: ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ನ ಸಾಮಾನ್ಯ ಸಭೆಯು ನವೆಂಬರ್ 5ರಂದು ಗೂನಡ್ಕದ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಖತೀಬರಾದ ಅಶ್ರಫ್ ಸಖಾಫಿ ಅಲ್ ಮಳ್ಹರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, 1926ರಲ್ಲಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಸ್ಥಾಪನೆಯಾದ ಹಿನ್ನೆಲೆ ಹಾಗೂ ಅದರ ಧಾರ್ಮಿಕ ಸೇವೆಗಳ ಕುರಿತು ವಿವರಿಸಿದರು. ಅಹ್ಲು ಸುನ್ನತ್ ವಲ್ ಜಮಾಅತ್ನ ಆಶಯ ಮತ್ತು ಆದರ್ಶಗಳನ್ನು ಪಾಲಿಸಿಕೊಂಡು ಜೀವನ ನಡೆಸುವಂತೆ ಕರೆ ನೀಡಿದರು.

ಅಂದಿನ ಸಾತ್ವಿಕ ಉಲಮಾ ದಿಗ್ಗಜರು ಕಟ್ಟಿ ಬೆಳೆಸಿದ ಸಮಸ್ತ ಸಂಘಟನೆಯ ಶತಮಾನೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಮಹಲ್ಲಾದಲ್ಲೂ ಶತಮಾನೋತ್ಸವದ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿದರು. ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಹಮ್ಮದ್ ಕುಂಞಿ ಗೂನಡ್ಕ ಅವರು, ತಾಲೂಕಿನ ಪ್ರತಿಯೊಂದು ಮಹಲ್ಲಾಗಳು ಸಮಸ್ತ ಶತಮಾನೋತ್ಸವದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸುಳ್ಯ ತಾಲೂಕು ಸಂಯುಕ್ತ ಖಾಝಿಗಳಾದ ಎ.ಪಿ. ಉಸ್ತಾದರಿಗೆ ಯೆನೆಪೊಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿರುವುದನ್ನು ಉಲ್ಲೇಖಿಸಿದ ಅವರು, ಮೊಗರ್ಪಣೆ ಉರೂಸ್ ಕಾರ್ಯಕ್ರಮಗಳಲ್ಲಿ ಉಸ್ತಾದರು ಭಾಗವಹಿಸುವ ನಿರೀಕ್ಷೆಯಿದ್ದು, ಆ ಸಂದರ್ಭದಲ್ಲಿ ಸಂಯುಕ್ತ ಜಮಾಅತ್ ವತಿಯಿಂದ ಗೌರವ ಸನ್ಮಾನ ನೀಡಲಾಗುವುದು ಎಂದು ಘೋಷಿಸಿದರು.
ಅಲ್ಲದೆ, ಉಸ್ತಾದರ ನಿರ್ದೇಶನದಂತೆ ಈಗಾಗಲೇ ಬಹುತೇಕ ಜಮಾಅತ್ಗಳಲ್ಲಿ ನಾಡು ದರ್ಸ್ ತರಗತಿಗಳು ನಡೆಯುತ್ತಿವೆ. ಇನ್ನೂ ಆರಂಭವಾಗದ ಜಮಾಅತ್ಗಳಲ್ಲಿ ಕೂಡಲೇ ತರಗತಿಗಳನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು.
ಶತಮಾನೋತ್ಸವ ಸಮಾವೇಶದ ಯಶಸ್ಸಿಗೆ ವಿಶೇಷ ಆದ್ಯತೆ
ಸಭೆಯಲ್ಲಿ ತಾಲೂಕು ಸಂಯುಕ್ತ ಜಮಾಅತ್ ಅನ್ನು ಮತ್ತಷ್ಟು ಬಲಪಡಿಸುವುದು, ಸಮಸ್ತ ಶತಮಾನೋತ್ಸವ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಲು ಎಲ್ಲರನ್ನು ಪ್ರೇರೇಪಿಸುವುದು ಹಾಗೂ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
ಶತಮಾನೋತ್ಸವ ಸಮಾವೇಶದ ಪ್ರಯುಕ್ತ ಈಗಾಗಲೇ ರಚಿಸಲಾಗಿರುವ ಎಕ್ಸಿಕ್ಯುಟಿವ್ ಕೌನ್ಸಿಲ್ (EC) ಹಾಗೂ ಅದರ ವಿವಿಧ ಘಟಕಗಳೊಂದಿಗೆ ಕೈಜೋಡಿಸಿ ಸಮಾವೇಶದ ಯಶಸ್ಸಿಗೆ ಶ್ರಮಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಂಯುಕ್ತ ಜಮಾಅತ್ನ ಕಾನೂನು ಸಲಹೆಗಾರರಾದ ನ್ಯಾಯವಾದಿ ಅಬೂಬಕ್ಕರ್ ಸೇರಿದಂತೆ ತಾಲೂಕಿನ ವಿವಿಧ ಮಹಲ್ಲಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.
ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ವಂದಿಸಿದರು.
