ನೆಲಮಂಗಲದ ಮೈಲನಹಳ್ಳಿಯಲ್ಲಿ ದಾರುಣ ಅಪಘಾತ; ಲಾರಿ ಹರಿದು ಮಹಿಳೆ ದುರ್ಮರಣ, ಪತಿಯ ಕಾಲು ತುಂಡು | ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ

ನೆಲಮಂಗಲ, ನ. 13: ಮಗಳ ಮದುವೆಯ ಲಗ್ನಪತ್ರಿಕೆ ಹಂಚಲು ತೆರಳುತ್ತಿದ್ದ ದಂಪತಿಯ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದು ಹರಿದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ನಿವಾಸಿ ಲಕ್ಷ್ಮೀದೇವಿ ಅಲಿಯಾಸ್ ದೇವಮ್ಮ (42) ಮೃತಪಟ್ಟ ಮಹಿಳೆ. ಅವರ ಪತಿ ವಿಜಯ್ ಕುಮಾರ್ (48) ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದಲ್ಲಿ ಅವರ ಕಾಲು ತುಂಡಾಗಿದೆ ಎಂದು ತಿಳಿದುಬಂದಿದೆ.

ಮಗಳ ಮದುವೆ ಸಂಭ್ರಮದ ನಡುವೆ ದುರಂತ

ದಂಪತಿಯ ಪುತ್ರಿ ಇಂದ್ರಾಣಿ ಅವರ ವಿವಾಹ ನವೆಂಬರ್ 26 ಮತ್ತು 27ರಂದು ನಿಗದಿಯಾಗಿತ್ತು. ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸುವ ಕನಸು ಕಂಡಿದ್ದ ವಿಜಯ್ ಕುಮಾರ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಲ-ಶೂಲ ಮಾಡಿ ಮದುವೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಕಳೆದ ಒಂದು ವಾರದಿಂದ ದಂಪತಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಲಗ್ನಪತ್ರಿಕೆ ಹಂಚುತ್ತಿದ್ದರು. ಅದರಂತೆ ಶುಕ್ರವಾರವೂ ನೆಲಮಂಗಲದಲ್ಲಿರುವ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಲು ಇಬ್ಬರೂ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಅವರ ಮೇಲೆ ಹರಿದಿದೆ. ಲಾರಿಯ ಚಕ್ರಕ್ಕೆ ಸಿಲುಕಿದ ದೇವಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ ಅವರ ಕಾಲುಗಳ ಮೇಲೂ ಲಾರಿ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದುವೆ ಮನೆಯಲ್ಲಿ ಸೂತಕದ ಛಾಯೆ

ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಕುಟುಂಬದವರು ದುಃಖದಲ್ಲಿ ಮುಳುಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಗಳ ಮದುವೆಯ ಸಂಭ್ರಮ ಮನೆಮಾಡಬೇಕಿದ್ದ ಕುಟುಂಬದಲ್ಲಿ ತಾಯಿಯ ಅಕಾಲಿಕ ಸಾವು ಬರಸಿಡಿಲಿನಂತೆ ಎರಗಿದೆ.

ಮೃತ ದೇವಮ್ಮ ಅವರ ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದೆ. ಗಾಯಾಳು ವಿಜಯ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *