ಬೆಂಗಳೂರು: ಆರೋಗ್ಯಸೌಧದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿಯ ವಿವಿಧ ಸಮಸ್ಯೆಗಳು, ಕುಂದುಕೊರತೆಗಳು ಹಾಗೂ ಬೇಡಿಕೆಗಳ ಕುರಿತು ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಮಹತ್ವದ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ 108 ಆಂಬುಲೆನ್ಸ್ ಚಾಲಕರು ತಮ್ಮ ಕರ್ತವ್ಯದ ವೇಳೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ಕೆಲಸದ ಒತ್ತಡ, ಮೂಲಭೂತ ಸೌಲಭ್ಯಗಳು ಹಾಗೂ ಇತರ ಕುಂದುಕೊರತೆಗಳ ಕುರಿತು ವಿವರವಾಗಿ ತಮ್ಮ ಅಹವಾಲುಗಳನ್ನು ಮಂಡಿಸಿದರು.
ಚಾಲಕರ ನ್ಯಾಯಯುತ ಬೇಡಿಕೆಗಳನ್ನು ಆಲಿಸಿದ ಯು.ಟಿ. ಖಾದರ್ ಅವರು, ಸಿಬ್ಬಂದಿಯ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದು ತಿಳಿಸಿದರು. ಬೇಡಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
108 ಆಂಬುಲೆನ್ಸ್ ಸೇವೆ ಜನಸಾಮಾನ್ಯರ ಜೀವ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅದೇ ವೇಳೆ, 108 ಸಿಬ್ಬಂದಿಯ ಹಿತರಕ್ಷಣೆಯ ಜೊತೆಗೆ ಸಾರ್ವಜನಿಕರಿಗೆ ತುರ್ತು ವೈದ್ಯಕೀಯ ಸೇವೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಸೇವೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, 108 ಆಂಬುಲೆನ್ಸ್ ಚಾಲಕರು ಹಾಗೂ ಚಾಲಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.


