1,158 ಅಂಕಗಳೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಂಧಿನಗರ; ಅನ್ಸಾರಿಯಾ ದ್ವಿತೀಯ, ಜಾಲ್ಸೂರು ಅಡ್ಕಾರ್ ತೃತೀಯ
ಸುಳ್ಯ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳ ಸುಳ್ಯ ರೇಂಜ್ ಮಟ್ಟದ ಪ್ರತಿಭೋತ್ಸವವು ನ. 22ರಂದು ಪೆರಾಜೆಯ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
‘ಸಾಹಿತ್ಯ ಅರಳಲಿ, ಪ್ರತಿಭೆಗಳು ಬೆಳೆಯಲಿ’ ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭೋತ್ಸವದ ಅಂಗವಾಗಿ ಸುಳ್ಯ ರೇಂಜ್ SJM ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ರೇಂಜ್ ವ್ಯಾಪ್ತಿಯ ವಿವಿಧ ಮದರಸಗಳ ವಿದ್ಯಾರ್ಥಿಗಳು ಪ್ರತಿಭೋತ್ಸವದಲ್ಲಿ ಭಾಗವಹಿಸಿ ವಿವಿಧ ಕಲಾ ಮತ್ತು ಸಾಹಿತ್ಯ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಹಾಗೂ ಕಲಾ ಮತ್ತು ಸಾಹಿತ್ಯಿಕ ಅಭಿರುಚಿಗಳನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.


ಸ್ಪರ್ಧೆಗಳ ಒಟ್ಟು ಅಂಕಗಳ ಆಧಾರದಲ್ಲಿ ಗಾಂಧಿನಗರ ಮದರಸವು 1,158 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅನ್ಸಾರಿಯಾ ಮದರಸವು 692 ಅಂಕಗಳೊಂದಿಗೆ ದ್ವಿತೀಯ ಹಾಗೂ ಜಾಲ್ಸೂರು ಅಡ್ಕಾರ್ ಮದರಸವು 570 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿವೆ.
ಇತರ ಮದರಸಗಳ ಪೈಕಿ ಪೈಚಾರ್ 524, ಮೊಗರ್ಪಣೆ 354, ಪೆರಾಜೆ 350, ಪೈಂಬಚ್ಚಾಲ್ 325, ಸುಣ್ಣಮೂಲೆ ಮತ್ತು ಜಟ್ಟಿಪಳ್ಳ ತಲಾ 301, ಗೂನಡ್ಕ 293, ಇರುವಂಬಳ್ಳ ಮತ್ತು ಗುತಿಗಾರು ತಲಾ 289, ಮೈತಡ್ಕ 282, ಬದಿಯಡ್ಕ 278, ಜಾಲ್ಸೂರು ಟೌನ್ 271 ಹಾಗೂ ಕುಂಬಕೋಡು 270 ಅಂಕಗಳನ್ನು ಗಳಿಸಿವೆ.


ಇನ್ನುಳಿದಂತೆ ಎಳಿಮಲೆ 155, ಶಾಂತಿನಗರ 152, ಜಯನಗರ 151, ಮೇನಾಲ ಮತ್ತು ಜೀರ್ಮುಕ್ಕಿ ತಲಾ 100, ಬಿಳಿಯಾರು 63 ಹಾಗೂ ಏನಾವರ 39 ಅಂಕಗಳನ್ನು ದಾಖಲಿಸಿವೆ.
ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆದ ಪ್ರತಿಭೋತ್ಸವವು ಮದರಸ ವಿದ್ಯಾರ್ಥಿಗಳಿಗೆ ತಮ್ಮ ಕಲಾ ಹಾಗೂ ಸಾಹಿತ್ಯಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸುಳ್ಯ ರೇಂಜ್ SJM ಪದಾಧಿಕಾರಿಗಳು, ಪೆರಾಜೆ ಮುಹಿಯುದ್ದೀನ್ ಜುಮಾ ಮಸೀದಿಯ ಪದಾಧಿಕಾರಿಗಳು ಹಾಗೂ ಸಂಘಟಕರು ಶ್ರಮಿಸಿದರು.




