ರವಿವಾರ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಇಬ್ಬರ ಮೃತದೇಹವೂ ಪತ್ತೆ; ಪ್ರವಾಸಕ್ಕೆ ಬಂದಿದ್ದ ತಂಡದಲ್ಲಿ ಆವರಿಸಿದ ಶೋಕ
ಕಾಪು: ಕಾಪು ಬೀಚ್ನಲ್ಲಿ ರವಿವಾರ ಸಮುದ್ರ ಪಾಲಾಗಿ ನಾಪತ್ತೆಯಾಗಿದ್ದ ಮತ್ತೋರ್ವ ಯುವಕನ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಮೃತನನ್ನು ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಜಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಅವರ ಮೃತದೇಹ ಪತ್ತೆಯಾಗಿತ್ತು.


ದಾವಣಗೆರೆಯಿಂದ ಕಾಪು ಬೀಚ್ಗೆ ವಿಹಾರಕ್ಕೆಂದು 12 ಮಂದಿ ಬಂದಿದ್ದರು. ಈ ಪೈಕಿ ಐವರು ಯುವಕರು ಸಮುದ್ರಕ್ಕೆ ಇಳಿದು ಈಜುತ್ತಿದ್ದ ವೇಳೆ ಮೂವರು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜೀವ ರಕ್ಷಕ ದಳದ ಸಿಬ್ಬಂದಿ ಮೂವರ ಪೈಕಿ ಓರ್ವನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.


ಉಳಿದ ಇಬ್ಬರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ರವಿವಾರ ತಡರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.


ಸೋಮವಾರ ಬೆಳಗ್ಗೆ ಸಮೀರ್ ಅವರ ಮೃತದೇಹ ಪತ್ತೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಮಲ್ಲಿಕ್ ರಿಹಾನ್ ಅವರ ಮೃತದೇಹವೂ ಸಮುದ್ರದಲ್ಲಿ ಮುಳುಗಿದ ಸ್ಥಳದ ಸಮೀಪವೇ ಪತ್ತೆಯಾಗಿದೆ. ಘಟನೆಯಿಂದ ಪ್ರವಾಸಕ್ಕೆ ಬಂದಿದ್ದ ತಂಡದಲ್ಲಿ ದುಃಖದ ವಾತಾವರಣ ಆವರಿಸಿದೆ.




