ಮಡಿಕೇರಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಅಂತಿಮ ಅಧಿಸೂಚನೆ ಸೋಮವಾರ ಪ್ರಕಟಗೊಂಡಿತ್ತು. ಈ ಹಿಂದೆ ಪ್ರಕಟಗೊಂಡಿದ್ದ ಕರಡು ಮೀಸಲಾತಿ ಪಟ್ಟಿಯನ್ನೇ ಯಾವುದೇ ಬದಲಾವಣೆ ಮಾಡದೆ ಅಂತಿಮಗೊಳಿಸಲಾಗಿತ್ತು. ಆದರೆ ಇದೀಗ ಪ್ರಕಟಗೊಂಡಿರುವ ಪರಿಷ್ಕೃತ ಅಂತಿಮ ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ.



ಮಾಹಿತಿಯ ಪ್ರಕಾರ, ಸಾಮಾನ್ಯ ಕ್ಷೇತ್ರವಾಗಿದ್ದ ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಇದೀಗ ಸಾಮಾನ್ಯ ಮಹಿಳಾ ಕ್ಷೇತ್ರವಾಗಿ ಬದಲಾಯಿಸಲಾಗಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕೂಡಿಗೆ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.



ಅದೇ ರೀತಿ, ಗುಡ್ಡೆಹೊಸೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗ ‘ಅ’ ಸಾಮಾನ್ಯ ಮೀಸಲಾತಿಯನ್ನು ಬದಲಾಯಿಸಿ ಹಿಂದುಳಿದ ವರ್ಗ ‘ಆ’ ಮಹಿಳೆಗೆ ಮೀಸಲಿಡಲಾಗಿದೆ.


ಇನ್ನು ವಾಲ್ಕೂರು-ತ್ಯಾಗತ್ತೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗ ‘ಆ’ ಮಹಿಳಾ ಮೀಸಲಾತಿಯನ್ನು ಬದಲಾಯಿಸಿ ಹಿಂದುಳಿದ ವರ್ಗ ‘ಆ’ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತಿಸಲಾಗಿದೆ.


ಈ ಮೂಲಕ ಕೊಡಗು ಜಿಲ್ಲೆಯ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆಗಳಾಗಿದ್ದು, ಪರಿಷ್ಕೃತ ಅಂತಿಮ ಅಧಿಸೂಚನೆ ಪ್ರಕಟಗೊಂಡಿದೆ.




