ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರವಾಗಿ ಪದೇಪದೇ ಕಿರುಕುಳ ನೀಡುತ್ತಿದ್ದ ವಕೀಲ ಅಣ್ಣನೇ, ತನ್ನ ಸ್ವಂತ ತಂಗಿಯ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆಗೈದಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನವೆಂಬರ್ 25ರಂದು ಬೆಳಗ್ಗೆ ನಡೆದಿದೆ.

ಮೀನಾಕ್ಷಿ (39) ಕೊಲೆಯಾದ ಮಹಿಳೆಯಾಗಿದ್ದು, ಅವರ ಸ್ವಂತ ಅಣ್ಣ ವಕೀಲ ಜಯರಾಮ್ ಕೊಲೆ ಆರೋಪಿಯಾಗಿದ್ದಾನೆ.

ಮಾಹಿತಿಯ ಪ್ರಕಾರ, ಮೀನಾಕ್ಷಿ ಅವರು ಪತಿಯಿಂದ ದೂರವಾಗಿ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಬಂದು ವಾಸವಿದ್ದರು. ಮನೆಯ ಎದುರಿನಲ್ಲಿದ್ದ ಶೀಟ್ ಮನೆಯಲ್ಲಿ ಮಕ್ಕಳೊಂದಿಗೆ ನೆಲೆಸಿದ್ದರು. ಆದರೆ, ತಂಗಿ ಶೀಟ್ ಮನೆಯಲ್ಲಿ ವಾಸವಿರುವುದನ್ನು ವಿರೋಧಿಸುತ್ತಿದ್ದ ಜಯರಾಮ್, ಮನೆ ಖಾಲಿ ಮಾಡುವಂತೆ ಪದೇಪದೇ ಜಗಳವಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ನವೆಂಬರ್ 25ರ ಬೆಳಗ್ಗೆ ಜಯರಾಮ್ ಅವರ ಪತ್ನಿ ಕಿಟಕಿಯಿಂದ ನೀರು ಎರಚಿದ ವಿಚಾರವಾಗಿ ಮೀನಾಕ್ಷಿ ಹಾಗೂ ಜಯರಾಮ್ ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀಟ್ ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಮತ್ತೆ ಜಗಳವಾಗಿದ್ದು, ಬಳಿಕ ಪತ್ನಿ ನಡೆದ ವಿಚಾರವನ್ನು ಜಯರಾಮ್‌ಗೆ ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಜಯರಾಮ್, ಏಕಾಏಕಿ ಬಂದು ತಂಗಿ ಮೀನಾಕ್ಷಿ ಅವರ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಮೀನಾಕ್ಷಿ ಮೃತಪಟ್ಟಿದ್ದಾರೆ.

ಘಟನೆಯಿಂದ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳ್ಳಂದೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಆರೋಪದಡಿ ಜಯರಾಮ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *