ಆನೆಕಾಡು ಸಮೀಪ ರಸ್ತೆ ಬದಿಯ ಚರಂಡಿಗೆ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು – ಸಾರ್ವಜನಿಕರ ಆಕ್ರೋಶ
ಕುಶಾಲನಗರ: ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಸಮೀಪ ರಸ್ತೆ ಬದಿಯ ಚರಂಡಿಗಳು ತ್ಯಾಜ್ಯ ವಿಲೇವಾರಿ ತಾಣಗಳಾಗಿ ಮಾರ್ಪಡುತ್ತಿವೆ. ಕೆಲ ಕಿಡಿಗೇಡಿಗಳು ತ್ಯಾಜ್ಯ ತುಂಬಿದ ಚೀಲಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಚರಂಡಿಗೆ ಎಸೆದು ಹೋಗುತ್ತಿದ್ದು, ಈ ಪ್ರದೇಶದಲ್ಲಿ ಅಸ್ವಚ್ಛತೆಯ ವಾತಾವರಣ ನಿರ್ಮಾಣವಾಗಿದೆ.



ಚರಂಡಿಯುದ್ದಕ್ಕೂ ತ್ಯಾಜ್ಯ ತುಂಬಿದ ಚೀಲಗಳ ರಾಶಿ ಹಾಗೂ ಪ್ಲಾಸ್ಟಿಕ್ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡುಬರುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುವುದರ ಜೊತೆಗೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.



ಒಂದೆಡೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ನಾಗರಿಕರು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಮನಬಂದಂತೆ ಕಸ ಎಸೆಯುವ ಮೂಲಕ ಪರಿಸರದ ಸ್ವಚ್ಛತೆಗೆ ಧಕ್ಕೆ ತರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.



ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚರಂಡಿಗೆ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಲು ತ್ಯಾಜ್ಯ ಚೀಲಗಳಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ದಂಡ ವಿಧಿಸುವುದರೊಂದಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






