ಹಬ್ಬದ ಫಲಾಹಾರ ಸವಿದು, ಹಿರಿಯರಿಂದ ಕದಿರು ಸ್ವೀಕರಿಸಿದ ಸಾರ್ವಜನಿಕರು

ಕುಶಾಲನಗರ: ಇಲ್ಲಿನ ಕೊಡವ ಸಮಾಜದಲ್ಲಿ ನವೆಂಬರ್ 25ರಂದು ಹುತ್ತರಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಸಂಭ್ರಮದಲ್ಲಿ ಕೊಡವ ಸಮಾಜದ ಬಾಂಧವರೊಂದಿಗೆ ಸ್ಥಳೀಯ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಹಬ್ಬದ ವಿಶೇಷ ಫಲಾಹಾರವನ್ನು ಸ್ವೀಕರಿಸಿದ ಸಾರ್ವಜನಿಕರು, ಹಿರಿಯರಿಂದ ಕದಿರನ್ನು ಪಡೆದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಅಂಜಪರ್ವಂಡ ಸನ್ನಿ ತಮ್ಮಯ್ಯ ಅವರು ನೆರೆಕಟ್ಟಿ ಕದಿರು ತೆಗೆದರು. ಮತ್ತೋರ್ವ ಹಿರಿಯರು ಹಾಗೂ ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಬೋಸ್ ಮೊಣ್ಣಪ್ಪ ಅವರು ನೆಲ್ಲಕ್ಕಿಯಲ್ಲಿ ದೇವರನ್ನು ಸ್ಮರಿಸಿ ಮಾತನಾಡಿ, ಸರ್ವರಿಗೂ ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಉಪಾಧ್ಯಕ್ಷ ಏಳ್ತಾಂಡ ರಂಜಿತ್, ಚೆರ್ಮಂದಣ್ಣ ಪ್ರಕಾಶ್, ಪೂರ್ವಾಧ್ಯಕ್ಷ ಮನು ನಂಜುಂಡ, ಪದಾಧಿಕಾರಿಗಳಾದ ಸಂಜು ಬೆಳಿಯಪ್ಪ, ಪುಲಿಯಂಡ ಚಂಗಪ್ಪ ಸೇರಿದಂತೆ ಸಮಾಜದ ನಿರ್ದೇಶಕರು, ನಿರ್ದೇಶಕಿಯರು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೊಕ್ಕಲೆರ ಧರಣಿ ಸೋಮಯ್ಯ, ಐಮೂಡಿಯಂಡ ಶೈಲಾ ಕುಶಾಲಪ್ಪ, ನಾಪಂಡ ರೋಹಿಣಿ, ದಮಯಂತಿ ಹಾಗೂ ಸರಸ್ವತಿ ಅವರಿಂದ ಮೂಡಿಬಂದ ಶ್ರೀ ದೇವರ ಕೀರ್ತನೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಏಳ್ತಾಂಡ ರಂಜಿತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *