ಅಪಘಾತದ ಭೀತಿ: ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಕೊಡಗು ಜನಾಭಿವೃದ್ಧಿ ಸಮಿತಿ ಸಂಸ್ಥಾಪಕ ದಾವೂದ್ ಆಗ್ರಹ
ಹಾಸನ–ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರದ ವಿಶಾಲ್ ಮಾರ್ಟ್ ಮುಂಭಾಗದಲ್ಲಿ ಕಲ್ಲು ಮತ್ತು ಜಲ್ಲಿ ಪುಡಿ ಸಾಗಿಸುವ ಟಿಪ್ಪರ್ಗಳಿಂದ ರಸ್ತೆಯ ಮೇಲೆ ಕಲ್ಲಿನ ಚೂರುಗಳು ಬೀಳುತ್ತಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೊಡಗು ಜನಾಭಿವೃದ್ಧಿ ಸಮಿತಿಯ ಸಂಸ್ಥಾಪಕ ದಾವೂದ್ ಅವರು ಆಗ್ರಹಿಸಿದ್ದಾರೆ.


ಟಿಪ್ಪರ್ಗಳಲ್ಲಿ ಯಾವುದೇ ಮುಚ್ಚಳ ಅಥವಾ ಸುರಕ್ಷತಾ ಹೊದಿಕೆ ಅಳವಡಿಸದೆ ಕಲ್ಲು ಮತ್ತು ಜಲ್ಲಿ ಪುಡಿಯನ್ನು ಸಾಗಿಸುತ್ತಿರುವುದರಿಂದ ರಸ್ತೆಯ ಮೇಲೆ ಕಲ್ಲಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅಪಘಾತ ಸಂಭವಿಸುವ ಆತಂಕ ಎದುರಾಗಿದೆ.


ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳು ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಟಿಪ್ಪರ್ಗಳಲ್ಲಿ ಸರಕು ಸಾಗಣೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸುವ ಟಿಪ್ಪರ್ ವಾಹನಗಳ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ರಸ್ತೆಯ ಮೇಲೆ ಬಿದ್ದಿರುವ ಕಲ್ಲು ಮತ್ತು ಜಲ್ಲಿ ಪುಡಿಯನ್ನು ತೆರವುಗೊಳಿಸಿ, ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಾವೂದ್ ಅವರು ಒತ್ತಾಯಿಸಿದ್ದಾರೆ.




