ದಕ್ಷಿಣ ಕನ್ನಡ ಜಿಲ್ಲೆಯ ನೋಂದಣಿ ವಾಹನಗಳಿಗೆ ಶೇ.50ರಷ್ಟು ರಿಯಾಯಿತಿ; ಸ್ಥಳೀಯರಿಗೆ ₹360 ಮಾಸಿಕ ಪಾಸ್ ವ್ಯವಸ್ಥೆ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಬಳಿ ನಿರ್ಮಿಸಲಾಗಿರುವ ನೂತನ ಟೋಲ್ ಪ್ಲಾಝಾ ನವೆಂಬರ್ 26ರಿಂದ ಕಾರ್ಯಾರಂಭಗೊಂಡಿದೆ.

ಬಿ.ಸಿ. ರೋಡ್‌ನಿಂದ ಅಡ್ಡಹೊಳೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಈಗಾಗಲೇ ಶೇ.95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲು-ನೀರಕಟ್ಟೆ ಮಧ್ಯೆ ಟೋಲ್ ಪ್ಲಾಝಾ ನಿರ್ಮಿಸಲಾಗಿದೆ.

ಬಿ.ಸಿ. ರೋಡ್‌ನಿಂದ ಪೆರಿಯಶಾಂತಿವರೆಗಿನ 46 ಕಿ.ಮೀ. ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಸಂಸ್ಥೆಯೇ ಟೋಲ್ ಪ್ಲಾಝಾ ನಿರ್ಮಾಣ ಕಾಮಗಾರಿಯನ್ನೂ ಪೂರ್ಣಗೊಳಿಸಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.

ಒಟ್ಟು 8 ಲೇನ್‌ಗಳಲ್ಲಿ ವಾಹನ ಸಂಚಾರ

ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಬದಿಗಳಲ್ಲಿ ತಲಾ ನಾಲ್ಕು ಲೇನ್‌ಗಳಿದ್ದು, ಏಕಕಾಲದಲ್ಲಿ ಒಟ್ಟು ಎಂಟು ಲೇನ್‌ಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದೆ. ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿಗಳಲ್ಲಿ ಪ್ರತ್ಯೇಕ ಲೇನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಟೋಲ್ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದೆ.

ಒಟ್ಟು ಎಂಟು ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು (3+3) ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ಉಳಿದ ಎರಡು ಲೇನ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಈ ಲೇನ್‌ಗಳಲ್ಲಿ ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಸ್ಕ್ಯಾನಿಂಗ್ ಮೂಲಕ ಪಾವತಿ ಮಾಡಲು ಅವಕಾಶವಿರಲಿದೆ ಎಂದು ತಿಳಿಸಲಾಗಿದೆ.

ಸ್ಥಳೀಯ ವಾಹನಗಳಿಗೆ ಶೇ.50ರಷ್ಟು ರಿಯಾಯಿತಿ

ದಕ್ಷಿಣ ಕನ್ನಡ ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಹನಗಳಿಗೆ ಟೋಲ್ ಶುಲ್ಕದಲ್ಲಿ ಶೇ.50ರಷ್ಟು ವಿನಾಯಿತಿ ದರ ನಿಗದಿಪಡಿಸಲಾಗಿದೆ. ಟೋಲ್ ಪ್ಲಾಝಾದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳಿಗೆ ₹360 ಮಾಸಿಕ ಪಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಬೆಂಗಳೂರು–ಮಂಗಳೂರು ಪ್ರಯಾಣ ಮತ್ತಷ್ಟು ದುಬಾರಿ?

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‌ವೆಲ್ ನಡುವಿನ ಭಾಗದಲ್ಲಿ ಬಿ.ಸಿ. ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಕಾರ್ಯನಿರ್ವಹಿಸುತ್ತಿದೆ.

ಇದೀಗ ವಳಾಲಿನಲ್ಲಿ ಹೊಸ ಟೋಲ್ ಪ್ಲಾಝಾ ಕಾರ್ಯಾರಂಭಗೊಂಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಟೋಲ್ ಪ್ಲಾಝಾಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು–ಮಂಗಳೂರು ನಡುವೆ ಪ್ರಯಾಣಿಸುವ ವಾಹನ ಸವಾರರು ಒಟ್ಟು ಏಳು ಟೋಲ್ ಪ್ಲಾಝಾಗಳಲ್ಲಿ ಶುಲ್ಕ ಪಾವತಿಸಬೇಕಾಗಲಿದೆ.

Leave a Reply

Your email address will not be published. Required fields are marked *