ಐಮಂಗಲದಲ್ಲಿ ಸಾಂಪ್ರದಾಯಿಕ ಸಂಭ್ರಮ; ನೂರಾರು ಮಂದಿ ಭಾಗಿ
ವಿರಾಜಪೇಟೆ: ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾದ ಪುತ್ತರಿ ಹಬ್ಬದ ಕದಿರು ತೆಗೆಯುವ ಕಾರ್ಯಕ್ರಮವನ್ನು ವಿರಾಜಪೇಟೆ ಸಮೀಪದ ಐಮಂಗಲದ (ಕೊಮ್ಮೆತೊಡು)ಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಐಮಂಗಲದ ಕೂತಂಬಟ್ಟಿರ ಹೆಚ್. ಸಾದಲಿ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.



ಕಾರ್ಯಕ್ರಮದ ಆರಂಭದಲ್ಲಿ ಕೊಡವ ಸಂಪ್ರದಾಯದ ವಿಶೇಷ ಉಪಾಹಾರವಾದ ತಂಬುಟ್ಟ್ ಹಾಗೂ ಪುತ್ತರಿ ಗೆಣಸನ್ನು ಸೇವಿಸಲಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಕೆಎಂಎ ಕೋಶಾಧಿಕಾರಿ ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಣಿ) ಹಾಜಿ ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಕದಿರು ಕೊಯ್ಯುವ ಸಾಧನವಾದ ‘ಕೊಯ್ಕತ್ತಿ’ಯನ್ನು ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.



ಬಳಿಕ ಎಲ್ಲರೂ ಸಾಮೂಹಿಕವಾಗಿ ಗದ್ದೆಗೆ ತೆರಳಿದರು. ಕೂತಂಬಟ್ಟಿರ ಕುಟುಂಬದ ಹಿರಿಯರಾದ ಹುಸೈನ್ ಅವರು ಭತ್ತದ ತೆನೆಯನ್ನು ಕೊಯ್ಯುವ ಮೂಲಕ ಸಾಂಪ್ರದಾಯಿಕ ಕದಿರು ತೆಗೆಯುವ ಆಚರಣೆಗೆ ಚಾಲನೆ ನೀಡಿದರು. ಕೊಯ್ದ ಭತ್ತದ ತೆನೆಗಳನ್ನು ನೆರೆದಿದ್ದವರಿಗೆ ವಿತರಿಸುವ ಮೂಲಕ ಪುತ್ತರಿ ಹಬ್ಬದ ಸಂಪ್ರದಾಯವನ್ನು ನೆರವೇರಿಸಲಾಯಿತು.



ಕದಿರು ತೆಗೆಯುವ ಆಚರಣೆ ಪೂರ್ಣಗೊಂಡ ಬಳಿಕ ಕೂತಂಬಟ್ಟಿರ ಐನ್ ಮನೆ ಆವರಣದಲ್ಲಿ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ ಗದ್ದೆಯಿಂದ ತರಲಾದ ಕದಿರನ್ನು ಭಾಗವಹಿಸಿದ್ದವರು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು. ಪುತ್ತರಿ ಹಬ್ಬದ ಸಂಭ್ರಮದೊಂದಿಗೆ ಕೃಷಿ ಪರಂಪರೆ ಹಾಗೂ ಕುಟುಂಬಗಳ ನಡುವಿನ ಬಾಂಧವ್ಯವನ್ನು ಸಾರುವ ಈ ಆಚರಣೆ ವಿಶೇಷ ಮೆರುಗು ನೀಡಿತು.
ಕೆಎಂಎ ಪದಾಧಿಕಾರಿಗಳ ಉಪಸ್ಥಿತಿ
ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಕೆಎಂಎ ನಿರ್ದೇಶಕ ಕೋಳುಮಂಡ ರಫೀಕ್ ಹಾಗೂ ಆತಿಥ್ಯ ವಹಿಸಿದ್ದ ಕೂತಂಬಟ್ಟಿರ ಹೆಚ್. ಸಾದಲಿ ಅವರು ವಹಿಸಿಕೊಂಡಿದ್ದರು.



ಕೆಎಂಎ ಪ್ರಧಾನ ಕಾರ್ಯದರ್ಶಿ ಈತಲತಂಡ ಎಂ. ರಫೀಕ್, ಸಂಘಟನಾ ಕಾರ್ಯದರ್ಶಿ ಕೊಟ್ಟೋಳಿಯ ಮೀತಲ್ತಂಡ ಎಂ. ಇಸ್ಮಾಯಿಲ್, ಸಹ ಕಾರ್ಯದರ್ಶಿ ವಿರಾಜಪೇಟೆಯ ಆಲೀರ ಹೆಚ್. ಅಬ್ದುಲ್ ಲತೀಫ್, ಹಿರಿಯ ನಿರ್ದೇಶಕರಾದ ಕೊಂಡಂಗೇರಿಯ ಕುಪ್ಪಂದಿರ ಕೆ. ಯೂಸುಫ್ ಹಾಜಿ, ಬೇಟೋಳಿಯ ಮಂಡೇಂಡ ಎ. ಮೊಯ್ದು, ನಿರ್ದೇಶಕರಾದ ಕೊಂಡಂಗೇರಿಯ ಪುಡಿಯಂಡ ಇ. ಶಾದುಲಿ, ಎಡಪಾಲದ ಕುಪ್ಪೋಡಂಡ ಎ. ಅಬ್ದುಲ್ ರಶೀದ್, ವಿರಾಜಪೇಟೆಯ ದುದ್ದಿಯಂಡ ಹೆಚ್. ಮೊಯ್ದು, ಕೊಳಕೇರಿಯ ಚೆರುಮಾನಿಕಾರಂಡ ಎ. ಅಹಮದ್, ಕುಂಜಿಲದ ಕುಂಡಂಡ ಎ. ರಜಾಕ್ ಹಾಗೂ ಚಿಟ್ಟಡೆಯ ಕೂವಲೆರ ಯು. ಫಕ್ರುದ್ದೀನ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಐಮಂಗಲದ ಕೋಳುಮಂಡ, ಕೂತಂಬಟ್ಟಿರ ಹಾಗೂ ಕೂವಲೆರ ಕುಟುಂಬಸ್ಥರು, ಗ್ರಾಮಸ್ಥರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



